ರಾಷ್ಟ್ರಪತಿ -
ಆಯಾ ದೇಶಗಳ ಸಂವಿಧಾನ ಪದ್ಧತಿಗೊಳಪಟ್ಟ ಸರ್ವೋನ್ನತ ಕಾರ್ಯಾಂಗಾಧಿಪತಿ (ಪ್ರೆಸಿಡೆಂಟ್). ಪ್ರಪಂಚದ ದೇಶಗಳಲ್ಲಿ ಅಲ್ಲಿಯ ರಾಜಕೀಯ ಬೆಳವಣಿಗೆಯಂತೆ ವಿವಿಧ ರೀತಿಯ ಕಾರ್ಯಾಂಗಗಳಿವೆ. ಅವುಗಳನ್ನು ನಾಮಮಾತ್ರ ಕಾರ್ಯಾಂಗ ಮತ್ತು ನೈಜ ಕಾರ್ಯಾಂಗ. ಏಕ ಮತ್ತು ಬಹುವ್ಯಕ್ತಿಗತ ಕಾರ್ಯಾಂಗ. ಅನುವಂಶೀಯ ಹಾಗೂ ಚುನಾಯಿತ ಕಾರ್ಯಾಂಗ, ರಾಜಕೀಯ ಮತ್ತು ಶಾಶ್ವತ ಕಾರ್ಯಾಂಗ ಹಾಗೂ ಸಂಸದೀಯ ಕಾರ್ಯಾಂಗ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು ಚುನಾಯಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಒಳಗೊಂಡಿರುತ್ತದೆ. ಭಾರತದ ಕೇಂದ್ರ ಸರ್ಕಾರದ ಕಾರ್ಯಾಂಗಾಧಿಪತಿಯನ್ನು ಭಾರತದ ರಾಷ್ಟ್ರಪತಿ ಎಂದು ಕರೆಯಲಾಗುತ್ತದೆ. ಪ್ರಸ್ತುತ ಲೇಖನ ಭಾರತದ ರಾಷ್ಟ್ರಪತಿ ಹುದ್ದೆಗೆ ಮಾತ್ರ ಸೀಮಿತವಾಗಿದೆ.

ಭಾರತದ ರಾಷ್ಟ್ರಪತಿಯಾಗಬಯಸುವ ವ್ಯಕ್ತಿ ಭಾರತದ ಪ್ರಜೆಯಾಗಿರಬೇಕು; ಆತನಿಗೆ 35 ವರ್ಷಗಳಾಗಿರಬೇಕು. ಸಂಸತ್ತಿನ ಸದಸ್ಯನಾಗಲು ಇರುವ ಎಲ್ಲ ಅರ್ಹತೆಗಳನ್ನು ಹೊಂದಿರಬೇಕು. ಕೇಂದ್ರ ರಾಜ್ಯ ಹಾಗೂ ಸ್ಥಳೀಯ ಸರ್ಕಾರದ ಅಧೀನದಲ್ಲಿ ಅಥವಾ ಸರ್ಕಾರದಿಂದ ನಿಯಂತ್ರಿತವಾದ ಯಾವುದೇ ಸಂಸ್ಥೆಗಳಲ್ಲಿ ಲಾಭದಾಯಕ ಹುದ್ದೆಯನ್ನು ಹೊಂದಿರಬಾರದು. ಈ ವ್ಯಾಪ್ತಿಗೆ ಮೀರಿದ ಕೆಲವು ಹುದ್ದೆಗಳಿವೆ. ಅಧ್ಯಕ್ಷ ಉಪಾಧ್ಯಕ್ಷ, ರಾಜ್ಯಪಾಲ, ಮತ್ತು ಕೇಂದ್ರ ಅಥವಾ ರಾಜ್ಯ ಮಂತ್ರಿ ಪದವಿಗಳಲ್ಲಿ ಯಾವುದನ್ನಾದರೂ ಆತ ಅಲಂಕರಿಸಿದ್ದರೆ ಅವು ಅಧ್ಯಕ್ಷ ಪದವಿಗೆ ಅಡ್ಡಿಯಾಗಲಾರವು. ರಾಷ್ಟ್ರಪತಿಯನ್ನು ಪರೋಕ್ಷ ಚುನಾವಣಾ ವಿಧಾನದಿಂದ ಸಂಸತ್ತಿನ ಉಭಯ ಸದನಗಳ ಚುನಾಯಿತ ಸದಸ್ಯರು ಮತ್ತು ರಾಜ್ಯಗಳ ವಿಧಾನ ಸಭೆಯ ಚುನಾಯಿತ ಸದಸ್ಯರು ಗುಪ್ತ ಮತದಾನದ ಮೂಲಕ ಐದು ವರ್ಷಗಳ ಅವಧಿಗೆ ಆಯ್ಕೆ ಮಾಡುವರು. 1974ರ ರಾಷ್ಟ್ರಪತಿ ಚುನಾವಣಾ ಕಾಯ್ದೆಯ ಪ್ರಕಾರ ರಾಷ್ಟ್ರಪತಿಸ್ಥಾನಕ್ಕೆ ಸ್ಪರ್ಧಿಸುವ ವ್ಯಕ್ತಿ ಈಗ ರೂ. 15,000 ಠೇವಣಿ ಕಟ್ಟುವುದರ ಜೊತೆಗೆ 50 ಮಂದಿ ಸಂಸತ್ ಸದಸ್ಯರಿಂದ ಸೂಚಿಸಲ್ಪಡಬೇಕು ಮತ್ತು 50 ಮಂದಿ ಸಂಸತ್ ಸದಸ್ಯರಿಂದ ಅನುಮೋದಿಸಲ್ಪಡಬೇಕು. ರಾಷ್ಟ್ರಪತಿಯಾಗಿ ಆಯ್ಕೆಯಾದವರು ಭಾರತದ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಂದ ಪ್ರಮಾಣವಚನ ಸ್ವೀಕರಿಸುತ್ತಾರೆ. ಭಾರತದ ರಾಷ್ಟ್ರಪತಿ ತಿಂಗಳಿಗೆ ರೂ. 20,000 ವೇತನ ಪಡೆಯುತ್ತಾರೆ. ರಾಷ್ಟ್ರಪತಿ ಭವನವನ್ನು ಅವರ ಅಧಿಕೃತ ವಾಸಕ್ಕಾಗಿ ಕೊಡಲಾಗುವುದು. ಈ ಭವನದ ಖರ್ಚುವೆಚ್ಚವನ್ನು ಕೇಂದ್ರ ಸರ್ಕಾರವೇ ವಹಿಸುವುದು. ರಾಷ್ಟ್ರಪತಿ ನಿವೃತ್ತಿಯಾದ ಬಳಿಕ ನಿವೃತ್ತಿ ವೇತನ ಪಡೆಯುತ್ತಾರೆ. ರಾಷ್ಟ್ರಪತಿಯ ಅಧಿಕಾರಾವಧಿಯಲ್ಲಿ ಅವರನ್ನು ದಸ್ತಗಿರಿ ಮಾಡುವಂತಿಲ್ಲ. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತಿಲ್ಲ. ಸಿವಿಲ್ ಮೊಕದ್ದಮೆಯನ್ನು ಹೂಡುವಾಗ ಎರಡು ತಿಂಗಳ ಲಿಖಿತ ನೋಟೀಸನ್ನು ನೀಡಬೇಕು. ರಾಷ್ಟ್ರಪತಿ ತನ್ನ ಅಧಿಕಾರದಿಂದ ನಿರ್ವಹಿಸಿದ ಯಾವುದೇ ಕಾರ್ಯವನ್ನು ಯಾವುದೇ ನ್ಯಾಯಾಲಯ ಪ್ರಶ್ನಿಸುವಂತಿಲ್ಲ.

ಭಾರತದ ರಾಷ್ಟ್ರಪತಿ ಪ್ರಥಮ ಪ್ರಮುಖರಾದರೂ ನಾಮಮಾತ್ರ ಕಾರ್ಯಾಂಗಾಧಿಪತಿ ಎನ್ನಬಹುದು. ಏಕೆಂದರೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಹಾಗೂ ಅವರ ಮಂತ್ರಿಮಂಡಲ ಸರ್ಕಾರದ ಪ್ರಮುಖರಾಗಿರುವುದಲ್ಲದೆ ನೈಜಕಾರ್ಯಾಂಗಾಧಿಕಾರಿಗಳಾಗಿರುತ್ತಾರೆ. ಪ್ರಧಾನಮಂತ್ರಿ ಹಾಗೂ ಅವರ ಮಂತ್ರಿಮಂಡಲದ ಸಲಹೆ ಮೇರೆಗೆ ರಾಷ್ಟ್ರಪತಿ ಅಧಿಕಾರ ನಡೆಸುತ್ತಾರೆ. ಪ್ರಧಾನ ಮಂತ್ರಿ ಹಾಗೂ ಮಂತ್ರಿಮಂಡಲ ರಾಷ್ಟ್ರಪತಿಯವರ ಹೆಸರಿನಲ್ಲಿ ದೇಶದ ಆಡಳಿತ ನಡೆಸುತ್ತಾರೆ.

ರಾಷ್ಟ್ರಪತಿ ಸಂವಿಧಾನವನ್ನು ಉಲ್ಲಂಘಿಸಿದರೆ ಹಾಗೂ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರದೆ ಅವರನ್ನು ಪದಚ್ಯುತಿಗೊಳಿಸಬಹುದು. ಪದಚ್ಯುತಿಗೊಳಿಸುವ ನಿರ್ಣಯವನ್ನು 14 ದಿನಗಳ ಮುನ್ಸೂಚನೆ ಕೊಟ್ಟು ಆ ಸೂಚನೆಗೆ ಸಭೆಯ ಒಟ್ಟು ಸದಸ್ಯರ ಪೈಕಿ ನಾಲ್ಕನೆಯ ಒಂದರಷ್ಟು ಸದಸ್ಯರು ಬೆಂಬಲ ನೀಡುವುದರ ಜೊತೆಗೆ ಅದೇ ಸದನದ ಮೂರನೆಯ ಎರಡರಷ್ಟು ಸದಸ್ಯರು ನಿರ್ಣಯವನ್ನು ಅನುಮೋದಿಸಬೇಕು. ಯಾವ ಸಭೆ ಇಂಥ ನಿರ್ಣಯವನ್ನು ಕೈಗೊಳ್ಳುತ್ತದೆಯೋ ಅದನ್ನು ಬಿಟ್ಟು ಮತ್ತೊಂದು ಸಭೆ ಆಪಾದನೆಗಳನ್ನು ವಿಚಾರಣೆಮಾಡಬೇಕು; ಆಪಾದನೆ ಸ್ಥಿರಪಟ್ಟಲ್ಲಿ ನಿರ್ಣಯವನ್ನು ಆ ಸಭೆಯ ಒಟ್ಟು ಸದಸ್ಯರ ಪೈಕಿ ಮೂರನೆಯ ಎರಡರಷ್ಟು ಬಹುಮತದಿಂದ ಅಂಗೀಕರಿಸಿದಲ್ಲಿ ರಾಷ್ಟ್ರಪತಿಯನ್ನು ಪದಚ್ಯುತಿಗೊಳಿಸಬಹುದು. 

ರಾಷ್ಟ್ರಪತಿ ಕೇಂದ್ರ ಕಾರ್ಯಾಂಗದ ಅಧಿಕಾರವನ್ನು ತಮ್ಮ ಅಧೀನ ಅಧಿಕಾರಿಗಳ ಮುಖೇನ ಚಲಾಯಿಸುತ್ತಾರೆ. ರಾಷ್ಟ್ರಪತಿಯು ಪ್ರಧಾನ ಮಂತ್ರಿಯನ್ನೂ ಆತನ ಸಲಹೆಯಂತೆ ಉಳಿದ ಮಂತ್ರಿಗಳನ್ನೂ ನೇಮಿಸುತ್ತಾರೆ. ರಾಜ್ಯಪಾಲರು ಆಟಾರ್ನಿ ಜನರಲ್, ಕೇಂದ್ರ ಮತ್ತು ರಾಜ್ಯದ ಉಚ್ಚ ಮತ್ತು ಮುಖ್ಯ ನ್ಯಾಯಾಲಯಗಳ ನ್ಯಾಧೀಶರು ಕೇಂದ್ರ ಮತ್ತು ರಾಜ್ಯ ಸೇವಾ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು, ಮಹಾನಿಯಂತ್ರಕ ಹಾಗೂ ಲೆಕ್ಕಪಾಲಕ. ಮುಖ್ಯ ಚುನಾವಣಾಧಿಕಾರಿ. ಹರಿಜನ ಮತ್ತು ಗಿರಿಜನರ ವಿಶೇಷ ಅಧಿಕಾರಿ ಮೊದಲಾದವರನ್ನು ನೇಮಿಸುತ್ತಾರೆ. ರಾಷ್ಟ್ರಪತಿ ರಕ್ಷಣಾ ಪಡೆಗಳ ಪದನಿಮಿತ್ತ ಮಹಾದಂಡನಾಯಕರಾಗಿರುತ್ತಾರೆ.

ರಾಷ್ಟ್ರಪತಿ ಸಂಸತ್ತಿನ ಅಧಿವೇಶನ ಕರೆಯುವ, ಮುಂದೂಡುವ ಹಾಗೂ ಅವಧಿಗೆ ಮುನ್ನ ವಿಸರ್ಜಿಸುವ ಅಧಿಕಾರ ಹೊಂದಿದ್ದಾರೆ. ಕಲೆ, ವಿe್ಞÁನ, ಸಾಮಾಜಿಕ ಸೇವೆ, ಶಿಕ್ಷಣ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 12 ಮಂದಿಯನ್ನು ರಾಜ್ಯಸಭೆಗೆ, ಇಬ್ಬರೂ ಆಂಗ್ಲೋ ಇಂಡಿಯನ್ನರನ್ನು ಲೋಕಸಭೆಗೆ ನೇಮಕ ಮಾಡುತ್ತಾರೆ. ಚುನಾವಣಾನಂತರ ಉಭಯ ಸದನಗಳ ಪ್ರಾರಂಭದ ಅಧಿವೇಶನವನ್ನು ಉದ್ದೇಶಿಸಿ ಭಾಷಣಮಾಡುತ್ತಾರೆ. ಸಂಸತ್ತಿನಲ್ಲಿ ಒಪ್ಪಿಗೆ ಪಡೆದ ಮಸೂದೆಗಳು ಜಾರಿಗೆ ಬೇಕಾದರೆ ರಾಷ್ಟ್ರಪತಿ ಒಪ್ಪಿಗೆ ನೀಡಬೇಕಾಗುತ್ತದೆ. ಒಂದು ವೇಳೆ ಸಂಸತ್ತು ಅಂಗೀಕರಿಸಿದ ಮಸೂದೆಗಳು (ಹಣಕಾಸಿನ ಮಸೂದೆಗಳನ್ನು ಬಿಟ್ಟು) ಸರಿಯಲ್ಲವೆಂದು ಕಂಡುಬಂದಲ್ಲಿ ಅಂಥ ಮಸೂದೆಯನ್ನು ಪುನರ್‍ಪರಿಶೀಲನೆಗೆ ಕಳುಹಿಸಬಹುದು. ಆಗ ಸಂಸತ್ತು ರಾಷ್ಟ್ರಪತಿ ಸಲಹೆಯನ್ನೂ ಒಪ್ಪಬಹುದು ಅಥವಾ ತಿರಸ್ಕರಿಸಬಹುದು. ಮತ್ತೇ ಅದೇ ಮಸೂದೆಯನ್ನು ಸಂಸತ್ತು ಅಂಗೀಕರಿಸಿ ಕಳುಹಿಸಿದಾಗ ರಾಷ್ಟ್ರಪತಿ ತಮ್ಮ ಒಪ್ಪಿಗೆ ನೀಡಬೇಕಾಗುತ್ತದೆ. ಕಾನೂನುಗಳನ್ನು ರೂಪಿಸುವಲ್ಲಿ ಉಭಯಸದನಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಿದಲ್ಲಿ ಜಂಟಿ ಅಧೀವೇಶನವನ್ನು ಕರೆಯುವ ಅಧಿಕಾರ ಹಾಗೂ ಸಂಸತ್ ಅಧಿವೇಶನದಲ್ಲಿ ಇಲ್ಲದಿದ್ದಾಗ ಸುಗ್ರಿವಾಜ್ಞೆಗಳನ್ನು ಘೋಷಿಸುವ ಹಕ್ಕು ರಾಷ್ಟ್ರಪತಿಯವರಿಗಿದೆ. ಈ ಸುಗ್ರಿವಾಜ್ಞೆ ಸಂಸತ್ತಿನ ಶಾಸನದಷ್ಟೇ ಪರಿಣಾಮಕಾರಿಯಾಗಿರುತ್ತದೆ. ಆದರೆ ಸಂಸತ್ತು ಪ್ರಾರಂಭವಾಗುವ ಆರು ವಾರಗಳಲ್ಲಿ ಈ ಸುಗ್ರಿವಾಜ್ಞೆಗಳನ್ನು ಅಂಗೀಕರಿಸಬೇಕು. ಇಲ್ಲದಿದ್ದಲ್ಲಿ ಈ ಆಜ್ಞೆಗಳು ತಮ್ಮ ಅಸ್ತಿತ್ವಗಳನ್ನು ಕಳೆದುಕೊಳ್ಳುತ್ತವೆ. ರಾಷ್ಟ್ರಪತಿ ಇಚ್ಚೆಪಟ್ಟಲ್ಲಿ ಸುಗ್ರಿವಾಜ್ಞೆಗಳನ್ನು ಹಿಂತೆಗೆದುಕೊಳ್ಳಬಹುದು. ರಾಜ್ಯದ ರಾಜ್ಯಪಾಲರುಗಳು ಕಳುಹಿಸಿದ ಮಸೂದೆಗಳನ್ನು ರಾಷ್ಟ್ರಪತಿ ಒಪ್ಪಬಹುದು ಅಥವಾ ತಿರಸ್ಕರಿಸಬಹುದು. ತಪ್ಪಿತಸ್ಥರಿಗೆ ಹಾಗೂ ಅಪರಾಧಿಗಳಿಗೆ ಕ್ಷಮದಾನ ಕೊಡುವುದು. ಶಿಕ್ಷೆಯ ಅವಧಿಯನ್ನು ಕಡಿಮೆಮಾಡುವುದು ಮತ್ತು ಕ್ಲಿಷ್ಟಕರ ಸಮಸ್ಯೆಗಳು ಉದ್ಭವಿಸಿದಲ್ಲಿ ಉಚ್ಚನ್ಯಾಯಾಲಯದ ಸಲಹೆಗಳನ್ನು ಕೇಳುವುದು ಮೊದಲಾದ ಅಧಿಕಾರ ರಾಷ್ಟ್ರಪತಿಗಿದೆ.

ದೇಶಕ್ಕೆ ಹೊರಗಿನವರಿಂದ ಆಕ್ರಮಣ ಭಯ ಅಥವಾ ಆಂತರಿಕ ಗಲಭೆಗಳು ಉಂಟಾದಲ್ಲಿ, ರಾಜ್ಯ ಸರ್ಕಾರಗಳು ಸಂವಿಧಾನಕ್ಕೆ ವಿರುದ್ಧವಾಗಿ ಆಡಳಿತಾಧಿಕಾರ ನಡೆಸಿದಲ್ಲಿ ಹಾಗೂ ದೇಶದಲ್ಲಿ ಹಣಕಾಸಿನ ಮುಗ್ಗಟ್ಟು ಉಂಟಾದಲ್ಲಿ ರಾಷ್ಟ್ರಪತಿ ಆಯಾ ಪರಿಸ್ಥಿತಿಗೆ ಅನುಗುಣವಾಗಿ ರಾಷ್ಟ್ರೀಯ ತುರ್ತುಪರಿಸ್ಥಿತಿ, ರಾಜ್ಯದ ತುರ್ತುಪರಿಸ್ಥಿತಿ ಮತ್ತು ಹಣಕಾಸು ತುರ್ತುಪರಿಸ್ಥಿತಿಯನ್ನು ಘೋಷಿಸಬಹುದು.

ರಾಷ್ಟ್ರಪತಿ ನಾಮಮಾತ್ರ ಕಾರ್ಯಾಂಗಾಧಿಪತಿಯಾಗಿದ್ದರೂ ಇಚ್ಚೆಪಟ್ಟಲ್ಲಿ ನಿರಂಕುಶಪ್ರಭುವಾಗುವ ಅವಕಾಶವಿದೆ. ಸಂಸತ್ತನ್ನು ಕರೆಯದೆ ಅಥವಾ ಅವಧಿಗೆ ಮುನ್ನ ವಿಸರ್ಜಿಸಿ ಹಾಗೂ ಮಂತ್ರಿಮಂಡಲವನ್ನು ವಜಾಮಾಡಿ ಮಹಾದಂಡನಾಯಕರ ಜೊತೆಗೂಡಿ ಕೆಲವು ಕಾಲದ ತನಕ ನಿರಂಕುಶ ಅಧಿಕಾರಿಯಾಗಬಹುದು. ಆದರೆ ಪ್ರಜಾಪ್ರಭುತ್ವವಾದಿ ಸರ್ಕಾರಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿರುವುದರಿಂದ ನಿರಂಕುಶಾಧಿಕಾರಿಯಾಗಲು ಸಾಧ್ಯವಿಲ್ಲ. ಅಲ್ಲದೆ, 42ನೆಯ ಸಂವಿಧಾನ ತಿದ್ದುಪಡಿ ಪ್ರಕಾರ ರಾಷ್ಟ್ರಪತಿ ಮಂತ್ರಿಮಂಡಲದ ಸಲಹೆಯನ್ನು ಕಡೆಗಣಿಸುವಂತಿಲ್ಲ. ಅಂಥ ಸಂದರ್ಭಗಳು ಒದಗಿಬಂದಲ್ಲಿ ಸಂಸತ್ತು ತಾನಾಗಿ ಸಭೆಸೇರಿ ರಾಷ್ಟ್ರಪತಿಯ ಕಾರ್ಯಕ್ರಮಗಳನ್ನು ಪರಿಶೀಲಿಸಿ ಯುಕ್ತ ಕ್ರಮ ಕೈಗೊಳ್ಳಬಹುದು.
ರಾಷ್ಟ್ರಪತಿಯಾಗಲು ಬೇಕಾದ ಅರ್ಹತೆಗಳನ್ನೇ ಉಪ ರಾಷ್ಟ್ರಪತಿಯಾಗಲೂ ಪರಿಗಣಿಸಲಾಗುತ್ತದೆ. ಉಪ ರಾಷ್ಟ್ರಪತಿ ಪದನಿಮಿತ್ತ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯ ಅಧ್ಯಕ್ಷರಾಗಿರುತ್ತಾರೆ. ರಾಷ್ಟ್ರಪತಿಯ ಮರಣದಿಂದ, ರಾಜೀನಾಮೆಯಿಂದ, ಗೈರುಹಾಜರಿಯಿಂದ, ಹಾಗೂ ಅನಾರೋಗ್ಯನಿಮಿತ್ತವಾಗಿ ತೆರವಾದ ರಾಷ್ಟ್ರಪತಿ ಜಾಗವನ್ನು ತಾತ್ಕಾಲಿಕವಾಗಿ ಉಪ ರಾಷ್ಟ್ರಪತಿ ವಹಿಸಿಕೊಳ್ಳುತ್ತಾರೆ. ಈ ಅವಧಿಯಲ್ಲಿ ರಾಷ್ಟ್ರಪತಿಯಂತೆಯೇ ಎಲ್ಲ ಸೌಲಭ್ಯಗಳನ್ನೂ ಅಧಿಕಾರವನ್ನೂ ಹೊಂದಿರುತ್ತಾರೆ.

ಇಲ್ಲಿಯ ತನಕ (1999) ಭಾರತದ ರಾಷ್ಟ್ರಪತಿಗಳ ಹಾಗೂ ಉಪರಾಷ್ಟ್ರಪತಿಗಳ ಪಟ್ಟಿ ಹೀಗಿದೆ:

ರಾಷ್ಟ್ರಪತಿಗಳು

ರಾಜೇಂದ್ರ ಪ್ರಸಾದ್ (1884-1963)	... 26 ಜನವರಿ1950 - 13 ಮೇ 	1962
ಸರ್ವೇಪಲ್ಲಿ ರಾಧಾಕೃಷ್ಣನ್(1888-1975)	... 13 ಮೇ 1962 - 13 ಮೇ	1967
eóÁಕಿರ್ ಹುಸೇನ್(1897- 1969)	... 13 ಮೇ 1967 - 3 ಮೇ 		1969
ವರಾಹಗಿರಿ ವೆಂಕಟಗಿರಿ(1894- 1980)	... 3 ಮೇ 1969 - 20 ಜುಲೈ 	1969
ಮಹಮದ್ ಹಿದಾಯುತುಲ್ಲಾ(1905-1992) 	... 3 ಮೇ 1969 - 20 ಜುಲೈ 	1969
ವರಾಹಗಿರಿ ವೆಂಕಟಗಿರಿ	... 24 ಆಗಸ್ಟ್ 1969 - 23 ಆಗಸ್ಟ್ 1974(ಹಂಗಾಮಿ)
ಫಕ್ರುದ್ದೀನ್ ಅಲಿ ಅಹಮದ್(1905-1977)	... 24 ಆಗಸ್ಟ್ 1974 - 11 ಫೆಬ್ರವರಿ 1977(ಹಂಗಾಮಿ)
ಬಸಪ್ಪ ದಾನಪ್ಪ ಜತ್ತಿ(1912- ) 	... 11 ಫೆಬ್ರವರಿ 1977 - 25 ಜುಲೈ 1977(ಹಂಗಾಮಿ)
ನೀಲಂ ಸಂಜೀವ ರೆಡ್ಡಿ(1913-1996)	... 25 ಜುಲೈ 1977 - 25 ಜುಲೈ 1982
ಜೇಲ್ ಸಿಂಗ್(1916-1995)	... 25 ಜುಲೈ 1982 - 24 ಜುಲೈ 1987
ಆರ್ ವೆಂಕಟರಾಮನ್(1910- )	... 25 ಜುಲೈ 1987 - 24 ಜುಲೈ 1992
ಶಂಕರ ದಯಾಳ್ ಶರ್ಮ(1918- ) 	... 25 ಜುಲೈ 1992 - 24 ಜುಲೈ 1997
ಕೆ. ಆರ್ ನಾರಾಯಣನ್(1921- )	... 25 ಜುಲೈ 1997 - 

ಉಪರಾಷ್ಟ್ರಪತಿಗಳು
ಸರ್ವೇಪಲ್ಲಿ ರಾಧಾಕೃಷ್ಣನ್	. . .	1952-1962
eóÁಕಿರ್ ಹುಸೇನ್	. . .	1962-1967
ವರಾಹಗಿರಿ ವೆಂಕಟಗಿರಿ	. . .	1967-1969
ಗೋಪಾಲ್ ಸ್ವರೂಪ್ ಪಾಠಕ್
(1896-1982)	. . .	1969-1974
ಬಸಪ್ಪ ದಾನಪ್ಪ ಜತ್ತಿ	. . .	1974-1979
ಮಹಮದ್ ಹಿದಾಯತುಲ್ಲಾ	. . . 	1979-1984
ಆರ್ ವೆಂಕಟರಾಮನ್	. . .	1984-1987
ಶಂಕರ್ ದಯಾಳ್ ಶರ್ಮ	. . .	1987-1992
ಕೆ. ಆರ್. ನಾರಾಯಣನ್	. . .	1992-1997
ಕೃಷ್ಣಕಾಂತ್				 . . .			21 ಆಗಸ್ಟ್ 1997 
(ಆರ್.ಪಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ